ಗುರುವಾರ, ನವೆಂಬರ್ 5, 2015

ಕೆಎಸ್‌ಒಯು ಕೋರ್ಸ್‌ಗಳ ಮಾನ್ಯತೆ ನವೀಕರಣಕ್ಕೆ ಯುಜಿಸಿ ಒಪ್ಪಿಗೆ.

ಬೆಂಗಳೂರು, ನವೆಂಬರ್ ರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 2015-16ನೇ ಸಾಲಿನ ಕೋರ್ಸ್‌ಗಳ ಮಾನ್ಯತೆ ನವೀಕರಣಕ್ಕೆ  ಒಪ್ಪಿಗೆ ನೀಡಿದೆ. ಕೆಲವು ತಿಂಗಳ ಹಿಂದೆ ಯುಜಿಸಿ 2012-13ರ ನಂತರ ಕೆಎಸ್‌ಒಯುದಿಂದ ಪಡೆದ ಎಲ್ಲಾ ಕೋರ್ಸ್‌ಗಳ ಮಾನ್ಯತೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು.


ಕೆಎಸ್‌ಒಯು ಕುಲಪತಿ ಎಂ.ಜಿ. ಕೃಷ್ಣನ್‌ ಅವರು ಈ ಕುರಿತು ಮಾಹಿತಿ ನೀಡಿದ್ದು, 'ಅಕ್ಟೋಬರ್ 28ರಂದು ದೆಹಲಿಯಲ್ಲಿ ನಡೆದ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸಭೆಯಲ್ಲಿ 2015-16 ನೇ ಸಾಲಿಗೆ ಕೆಎಸ್ಒಯು ಕೋರ್ಸ್‌ಗಳ ಮಾನ್ಯತೆ ನವೀಕರಣಕ್ಕೆ ಅನುಮತಿ ದೊರೆತಿದೆ' ಎಂದು ಹೇಳಿದ್ದಾರೆ.
'ಯುಜಿಸಿಯ ನಿರ್ದೇಶನದಂತೆ ಹೊರರಾಜ್ಯಗಳ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಒಪ್ಪಂದ, ಆನ್‌ಲೈನ್‌ ಮತ್ತು ತಾಂತ್ರಿಕ ಕೋರ್ಸ್‌ಗಳನ್ನು ಕೆಎಸ್‌ಒಯು ರದ್ದುಗೊಳಿಸಿದೆ. ಈ ಬಗ್ಗೆ ಪ್ರಮಾಣಪತ್ರವನ್ನು ಸಲ್ಲಿಸಲಾಗಿದೆ' ಎಂದು ಕುಲಪತಿಗಳು ಮಾಹಿತಿ ನೀಡಿದರು. 
ಆದರೆ, ಕೋರ್ಸ್ ನವೀಕರಣದ ಬಗ್ಗೆ ಯುಜಿಸಿಯಿಂದ ಅಧಿಕೃತವಾದ ಆದೇಶ ಇನ್ನೂ ಹೊರಬಿದ್ದಿಲ್ಲ. 'ಒಂದೆರಡು ದಿನಗಳಲ್ಲಿ ಯುಜಿಸಿಯಿಂದ ಅಧಿಕೃತವಾಗಿ ಪತ್ರ ಬರಲಿದೆ. ಪತ್ರ ತಲುಪಿದ ನಂತರ ಈ ಸಾಲಿನ ಪ್ರವೇಶಾತಿಗೆ ಅಧಿಸೂಚನೆ ಹೊರಡಿಸಲಾಗುವುದು' ಎಂದು ಎಂ.ಜಿ. ಕೃಷ್ಣನ್‌ ತಿಳಿಸಿದರು.
ಪತ್ರ ವ್ಯವಹಾರ ಮುಂದುವರೆದಿದೆ : 2012-13ರ ನಂತರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ (ಕೆಎಸ್‌ಒಯು) ಪಡೆದ ಎಲ್ಲಾ ಕೋರ್ಸ್‌ಗಳ ಮಾನ್ಯತೆಯನ್ನು ರದ್ದುಪಡಿಸಿ ಯುಜಿಸಿ 2015ರ ಜೂನ್‌ನಲ್ಲಿ ಆದೇಶ ಹೊರಡಿಸಿತ್ತು.
ಸದ್ಯ 2015-16ನೇ ಸಾಲಿನ ಕೋರ್ಸ್‌ಗಳ ಮಾನ್ಯತೆ ನವೀಕರಣಕ್ಕೆ ಯುಜಿಸಿ ಅನುಮತಿ ನೀಡಿದೆ. 2012-13, 2014-15ನೇ ಸಾಲಿನ ಕೋರ್ಸ್‌ಗಳಿಗೆ ಮಾನ್ಯತೆ ನೀಡುವ ಕುರಿತು ಯುಜಿಸಿಯೊಂದಿಗೆ ಕೆಎಸ್‌ಒಯು ಪತ್ರ ವ್ಯವಹಾರ ಮುಂದುವರಿದಿದೆ.
ಮಾನ್ಯತೆ ರದ್ದು ಏಕೆ? : ಕೆಎಸ್‌ಒಯು ತನ್ನ ವ್ಯಾಪ್ತಿಯನ್ನು ಮೀರಿ ಹೊರ ರಾಜ್ಯಗಳಲ್ಲಿ ಖಾಸಗಿ ಸಂಸ್ಥೆಗಳು, ಕೋಚಿಂಗ್‌ ಕೇಂದ್ರಗಳ ಸಹಯೋಗದಲ್ಲಿ ದೂರ ಶಿಕ್ಷಣದಡಿ ವಿವಿಧ ಕೋರ್ಸ್‌ಗಳನ್ನು ನಡೆಸುತ್ತಿದೆ. ಮಾನವ ಸಂಪನ್ಮೂಲ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಯುಜಿಸಿ 2012-13ರ ನಂತರ ಕೆಎಸ್‌ಒಯುನಿಂದ ಪಡೆದ ಎಲ್ಲಾ ಕೋರ್ಸ್‌ಗಳ ಮಾನ್ಯತೆಯನ್ನು ರದ್ದುಪಡಿಸಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ